ದ್ವಂದ್ವಾದರ್ಶಗಳ ಆಯ್ಕೆ

               -- : ದ್ವಂದ್ವಾದರ್ಶಗಳ ಆಯ್ಕೆ :--


ಹಬ್ಬ ಹರಿದಿನಗಳಂದು ಮನೆಯ ಹಿರಿದಾದ ಬಾಗಿಲಿನ ಸೊಬಗನ್ಹೆಚ್ಚಿಸುವ ವಾಸನಾಯೋಗ್ಯ ರಸಸಹಿತ ಮಾವಿನ ಎಲೆಗಳ ತೋರಣದ ಜಾಗವನ್ನು ರಸಹೀನ ಪ್ಲ್ಯಾಸ್ಟಿಕಿನ ತೋರಣ ಬಣ್ಣ ಬಿಂಬಕವಾಗಿ ಜೀವಾಂಶವಿರುವ ಕಣಕ್ಕಿಂತಲೂ ನಿರ್ಜೀವಿ ಕಣ ರಾರಾಜೀಸುತ್ತಿರುವ ಅತ್ಯುನ್ನತ ಕಾಲಘಟ್ಟವಿದು.


           
           ತರಕಾರಿ, ದವಸ, ಧಾನ್ಯ, ಹಣ್ಣುಗಳ ಪೋಶಕಾಂಶಗಳಿಂದ ಬಿಡುಗಡೆಯಾಗುವ ಜೀವರಸಕಣವನ್ನು ಹೀರಿ ಬಲಿಷ್ಟವಾಗುವ ಕರುಳ ಬಳ್ಳಿಗಳು ಸಹಿತ ಆಧುನಿಕತೆಯ ಪರಾಕಾಷ್ಠೆಯ ನವ ನೂತನ ಜಂಕ ಸಂಸ್ಕೃತಿಯ ಗೊಬಿ ಮಂಚೂರಿ, ಪಾನಿ ಪುರಿ, ಸ್ನ್ಯಾಕ್ಸ, ಭೆಲ್ ಪೂರಿ ಒಂದೇ ಎರಡೆ ಎಣಿಕೆಗೆ ಸಿಗದಷ್ಟು ಜಂಕಿಗಳ ಮೇಲೆ ವಿಶ್ವಾಸಾರ್ಹತೆ ಬೆಳೆಸಿಕೊಂಡಿವೆ.

ಇಲ್ಲಿ ಕರುಳ ಬಳ್ಳಿಯ ತಪ್ಪು ಇಲ್ಲ , ಮನೆಯ ಹೆಬ್ಬಾಗಿಲಿನದು ಇಲ್ಲ ಆದರೆ ಮನೆಯ ಹೆಬ್ಬಾಗಿಲಿಗೆ ಮರದ ಎಲೆಯ ವಾಸನೆ ಇಲ್ಲ. ಕರುಳ ಬಳ್ಳಿಗೆ ತಿನ್ನುವ ಅಗುಳಿನ ಶಕ್ತಿಯ ಅರಿವು ಇಲ್ಲ.


           ಇನ್ನು ಹಣದ ಸಂಶೋಧನೆಯಾಗದ ಅಂದಿನ ಕೌಟುಂಬಿಕ ವ್ಯವಸ್ಥೆಯಲ್ಲಿ ಮನುಷ್ಯ, ಮಗು, ಹಿರಿಯರು , ಹೆಣ್ಣುಮಕ್ಕಳು ಅಲ್ಲಗಳೆಯಲಾಗದ ಪಾತ್ರ ನಿರ್ಣಯ ಹೊಂದಿದ್ದರಲ್ಲದೆ ಅಳತೆಯ ಮಾನದಂಡ ಗುಣ, ಸೌಮ್ಯತೆ, ಕರುಣೆ, ಬಾಂಧವ್ಯದ ಅರಿವು ಹಾಗೂ ದೈಹಿಕ ಸಬಲತೆಯನ್ನು ಅವಲಂಬಿಸಿತ್ತು. ಇಂದು ಮನುಷ್ಯ ಪ್ರಪಂಚದ ಅತೀ ಕೆಟ್ಟ ಸಂಶೋಧನೆಯಾದ ಹಣವನ್ನು ಮಾತ್ರ ಅವಲಂಬಿಸಿದೆ ಎಂದು ಸುವರ್ಣಾಕ್ಷರದಲ್ಲಿ ಬರೆದಿಟ್ಟರು ತಪ್ಪಿಲ್ಲ. ನಮ್ಮ ಸಂಶೋಧನಯಾದ " ನಾಣ್ಯ ಗಣ್ಯಾತೀಗಣ್ಯರ ಪಾತ್ರವನ್ನು ನಗಣ್ಯವಾಗಿಸುತ್ತಿದೆ ".

ಬಹುಷಃ ಮನೋವಿಜ್ಞಾನಿಗಳು ಮೊದಲು ನಿರ್ಧರಿಸಿದ ಹಸುಳೆತನ , ಪೂರ್ವ ಬಾಲ್ಯಾ , ಉತ್ತರ ಬಾಲ್ಯ , ಹದಿಹರೆಯದ ಹಾಗೂ ಪ್ರೌಢಾವಸ್ಥೆಗಳ ವಯೋಮಿತಿಯನ್ನು ತಗ್ಗಿಸಬೇಕಾದ ಅಗತ್ಯವಿದೆ ಎನ್ನುವುದು ನನ್ನ ವಾದ. ಏಕೆಂದರೆ, ಆಹಾರ ಕ್ರಮ, ಬದಲಾದ ಜೀವನ ಕ್ರಮ, ವಿಭಿನ್ನ ಚಿಂತನಾ ಶೈಲಿ ಹಾಗೂ ಬಳಸುವ ಸಾಧನಗಳ ಬದಲಾವಣೆಯ ಕಾರಣದಿಂದ ನಮ್ಮೇಲ್ಲರ ಜೀವಿತಾವಧಿ ತಗ್ಗಿದೆ ಅದಕ್ಕಾಗಿಯೇ ಅಂದು ಪದವಿ ಅಥವಾ ಸ್ನಾತಕೋತ್ತರ ಪದವಿ ಓದುವವರು ಬೀಡಿ, ಸಿಗರೇಟುಗಳ ಸಹವಾಸ ಬಯಸಿದರೆ ಇಂದು ಪ್ರೌಢಶಾಲೆಯಲ್ಲಿ ಇ ಬಯಕೆ ಬೇರುರುತ್ತಿದೆ. ಅಂದು ೨೦ ವರ್ಷಗಳಿಗಾಗುತ್ತಿದ್ದ ಬಯಕೆ ಇಂದು ೧೦ ವರ್ಷಕ್ಕಾಗುತ್ತಿದೆ. ಅದಕ್ಕಾಗಿಯೇ ಎಲ್ಲವುಗಳ ವಯೋರಚನೆಯ ಪುನರ್ವ್ಯಾಖ್ಯಾನ ಮಾಡಬೇಕಿದೆ.

ಕವಿತೆ, ಕಾದಂಬರಿ' ಕಥೆಗಳನ್ನು ಕೇಳುವ ಜಾಗದಲ್ಲಿ ಇಂದು ಹಲವಾರು ತಾಂತ್ರಿಕ ಸಂಶೋಧನೆಗಳಾದ ವಿಡಿಯೋ ಗೆಮಗಳು ಮಕ್ಕಳ ಮನಗೆದ್ದಿವೆ. ಲೇಖಕರು, ವಿಜ್ಞಾನಿಗಳು, ಸ್ವಾತಂತ್ರ್ಯ ಹೋರಾಟಗಾರರು ಸಂಗೀತಗಾರರು ಮೆಚ್ಚಿನ ನಾಯಕರಾಗುವ ಸ್ಥಾನದಲ್ಲಿ ಸಿನಿಮಾ ನಟರು,ನಟಿಯರು, ದೇಹ ದಾರ್ಡ್ಯರು, ರಾಜಕೀಯದವರು ಹಾಗೂ ಕ್ರೀಕೆಟ್ ಆಟಗಾರರು ಸ್ಥಾನವನ್ನಾಕ್ರಮಿಸಿದ್ದಾರೆ. ಇವರು ಕೆಟ್ಟವರೆಂದಲ್ಲ ಇಷ್ಟು ಚಿಕ್ಕಂದಿನಲ್ಲಿ ಇವರಾಯ್ಕೆ ಸರಿಯಲ್ಲ ಹಾಗೂ ಯಾವತ್ತೂ ಮಕ್ಕಳಿಗೆ ಪ್ರಾರಂಭಿಕ ಹಂತದಲ್ಲಿ ಆದರ್ಶಪ್ರಾಯ ವಿದ್ಯಾ ಲೋಕದ ಸಾಧಕನೇ ಆಗಿರಬೇಕು.

ಮಿತಿರಹಿತ ಮನರಂಜನೆ, ನಿರಂತರ ಪರ್ಯಟನೆ , ಅಗತ್ಯಕ್ಕೆ ತಕ್ಕಂತೆ ಸಂಬಂಧಗಳ ಬದಲಾವಣೆ ಇವತ್ತಿನ ಯುವ ಜನರ ಮೂಲ ಲಕ್ಷಣಗಳಾಗಿವೆ. ಅಘಾದ ಬದುಕಿನ ದರ್ಶನ ಅವರಿಗಾಗುತ್ತಲೇ ಇಲ್ಲ.
ಊಟದ ಜೊತೆಗಿನ ಉಪ್ಪಿನ ಕಾಯಿಯು ಊಟದ ಸ್ಥಾನವನ್ನಾಕ್ರಮಿಸಿದೆ. ಅದಕ್ಕೆ ಇಂದು ಊಟದ ಜೊತೆ ಉಪ್ಪಿನ ಕಾಯಿ ಎನ್ನುವುದರ ಬದಲು "ಉಪ್ಪಿನ ಕಾಯಿಯ ಜೊತೆ ಊಟ ಎನ್ನಬೇಕಾಗಿದೆ". ಆದರೆ ಉಪ್ಪಿನ ಕಾಯಿಯ ಊಟದ ನಂತರ ಹೊಟ್ಟೆ ಹೇಗೆ ಮೈಗೆ ಒಳಿತನ್ನು ಕೊಟ್ಟಿತು ಹೇಳಿ ? 

                  ಶಿಕ್ಷಣವ್ಯವಸ್ಥೆಗೆ ಬಂದರೆ ನಾವು ನಿರ್ಮಿಸುತ್ತಿರುವುದು ಬಲಿಷ್ಠ ನಿರುದ್ಯೋಗಿಗಳನ್ನಲ್ಲದೆ ಕನಿಷ್ಠ ಉದ್ಯೋಗಿಗಳನ್ನು ಅಲ್ಲ. ಉದ್ಯೋಗಕ್ಕೆ ಆಮೇಲೆ ಬರೋಣ ಮೊದಲು ಸುಶಿಕ್ಷಿತನೆಂದರೆ ಯಾರು ? ಎನ್ನುವುದನ್ನು ಪುನರ್ ವ್ಯಾಖ್ಯಾನಿಸಬೇಕಿದೆ.

ಸಾರ್ವಜನಿಕ ಶೌಚಾಲಯದಲ್ಲಿ ಗುಟಕಾ ಉಗಿದು ಬಾಗಿಲಿನ ಸಂದುಗಳಲ್ಲಿ ಗುಟಕಾ ಚೀಟಿ ಸೇರಿಸುವವ, ವಿಕೆಂಡ ಪಾರ್ಟಿ ಎಂದು ಸ್ವಚ್ಚಂಧ ಪರಿಸರದಲ್ಲಿ ಬಾಟಲಿ, ಪ್ಲ್ಯಾಸ್ಟಿಕ್ ಚೀಲಗಳನ್ನು ಎಸೆಯುವವ, 
ನದಿ ಪಾತ್ರಗಳಲ್ಲಿ ತನ್ನ ಕೈಗಾರಿಕೆ ತ್ಯಾಜ್ಯ ಹರಿಬಿಡುವವ, ಬಹಳಷ್ಟು ಕಲಿತಿದ್ದೆನೆಂದು ತಿಂದು ತಿರುಗುವವ BA, BSc, Bcom, MA, MSc, Mcom ಹೀಗೆ ಹಲವಾರು ಕೋರ್ಸ್ ಮುಗಿಸಿದ ಮಾತ್ರಕ್ಕೆ ಸುಶಿಕ್ಷಿತನೇ ?

ಇನ್ನು ಉದ್ಯೋಗದ ವಿಚಾರಕ್ಕೆ ಬಂದರೆ ಮೇಲೆ ತಿಳಿಸಿದಕ್ಕಿಂತಲೂ ಅಧಿಕ ಕೋರ್ಸಗಳನ್ನು ಮುಗಿಸಿ ಸರಕಾರಿ ನೌಕರಿಗೆ ನಿರಂತರ ಅರ್ಜಿ ಹಾಕುತ್ತಾ , ತನ್ನ ವಯೋಮಿತಿ ಏರಿದ ಮೇಲೆ ವಯೋಮಿತಿ ಹೆಚ್ಚಿಸಿ ಅವಕಾಶ ಕೊಡಿ ಎಂದು ಪ್ರತಿಭಟಿಸಿ ಮತ್ತೆ ಪರೀಕ್ಷೆ ಬರೆದು ನೇಮಕಾತಿ ಪತ್ರ ಪಡೆಯಲಾಗದ ಲಕ್ಷಾಂತರ ಉದ್ಯೋಗವು ಇಲ್ಲದ ನಿರೋದ್ಯೋಗಿಯು ಎನಿಸಿಕೊಳ್ಳದ ಶಿನ್ನಿರುದ್ಯೊಗಿಗಳ (ಶಿಕ್ಷಿತ ನಿರುದ್ಯೊಗಿ) ನಿರ್ಮಾಣವಾಗಿದೆ. 

ಇನ್ನೊಂದು ಕಡೆ ಶಾಲೆಯ ಸಮೀಪವು ಸುಳಿಯದ ಇವನ ವಯಸ್ಸಿನವನೇ ಒಂದು ಎಗ್ಗ ರೈಸ್ ಗಾಡಿ ಇಟ್ಟು ದಿನಕ್ಕೆ ೧೦೦೦ ರೂಪಾಯಿಗಳಿಸುವ ಅನಕ್ಷರಸ್ಥನು ಅಲ್ಲೇ ಇದ್ದಾನೆ. ಇಲ್ಲಿ ಅಕ್ಷರ, ಅನಕ್ಷರ ಎನ್ನುವುದು ಯಾವುದೇ ಬದಲಾವಣೆಯ ಸೂಚಕವಲ್ಲ ಯಾರಿಗೂ ಭಾರವಾಗದ ಹಾಗೂ ಇತರರ ಭಾರವನ್ನು ಹೊರಬಲ್ಲ ಬದುಕು ಸಾಗಿಸುತ್ತಿರುವವ ಯಾರು ಎನ್ನುವದು ಪ್ರಮುಖ. 

               
                   ದೂರದ ರಾಜಸ್ಥಾನದ ಮಾರವಾಡಿಗಳು ಹಳ್ಳಿ ಹಳ್ಳಿಗೂ ತಮ್ಮ ಸ್ವತಂತ್ರ ವ್ಯಾಪಾರ ಸಾಮ್ರಾಜ್ಯ ಸ್ಥಾಪಿಸುತ್ತಿದ್ದಾರೆ. ಅವನು ಕೂಡಾ ಅನಕ್ಷರಸ್ಥ ಹಾಗೂ ನಮ್ಮ ನುಡಿಬಾರದವ ನಮ್ಮೇಲ್ಲರ ಮನೆಗಳಲ್ಲಿ ಅವನಂಗಡಿಯ ಸಾಧನಗಳಿವೆ.  ಊರಿನ ಹಳೆಯ ಅಂಗಡಿ ಮಾಲಿಕ ಇಂದು ನಿನ್ನೆ ಬಂದ ಮಾರವಾಡಿ ಅಂಗಡಿಯ ಚಿಲ್ಲರೆ ಗ್ರಾಹಕ.  ಇದನ್ನೇಲ್ಲಾ ನೋಡುತ್ತಾ ಮನಸ್ಸು ಮಾಡದೆ ಕಟ್ಟಿಗೆ ಕುಳಿತುಕೊಳ್ಳುವ ಮಹಾನ ಪದವೀಧರರು ಅದೆಲ್ಲಾ ಮಾರವಾಡಿಗಳ ವ್ಯಾಪಾರದ  ಅದೃಷ್ಟ ಬಿಡು ಎಲ್ಲರಿಗೂ ಅದು ಸಾಧ್ಯವೇನು ಎಂದು ಪ್ರಶ್ನಿಸಿಕೊಂಡ ನಿರುದ್ಯೋಗದ ಬಲಿಷ್ಠತೆಯ ಮಟ್ಟಕ್ಕೆರುತ್ತಾರೆ ಅಷ್ಟೇ !! 
         
             ವಿಚಿತ್ರ ಸಂಗತಿ ಎಂದರೆ, ಸರಕಾರ ಯಾವ ಕಾಲಕ್ಕೂ ಶಾಲೆ ಕಲಿತವರಷ್ಟು ಉದ್ಯೋಗ ಸೃಷ್ಟಿಸಲಾಗದು ಅದು ಯಾವಾಗ ಕರೆದರು ಸರಿಸುಮಾರು ೧ : ೧೦೦ ರ ಅನುಪಾತದಲ್ಲೇ ಇರುತ್ತದೆ. ಹಾಗಾದರೇ ಉದ್ಯೋಗ ದೊರೆಯದ ೯೯ ಜನ ಎನು ಮಾಡುವುದು ? 
ಮುಂದಿನ ಪರೀಕ್ಷೆ ಅಂದುಕೊಳ್ಳಿ ಮತ್ತೆ ಆ ಸ್ಪರ್ಧೆಗೆ ಹೊಸಬರು ಸೇರಿರುತ್ತಾರೆ. ಇ ೯೯ ಕ್ಕೆ ಸಂಖ್ಯೆ ಸೇರುತ್ತಾ ಹೋಗುತ್ತದೆಯೇ ಹೊರತು ಕಡಿಮೆಯಾಗದು. ಅದಕ್ಕೆ ಇಂದಿನ ಶಿಕ್ಷಣ ಬಲಿಷ್ಠ ನಿರುದ್ಯೋಗಿಗಳ ನಿರ್ಮಾಣ ಮಾಡುತ್ತಿದೆ ಹೊರತಾಗಿ ಕನಿಷ್ಠ ಉದ್ಯೋಗಿಗಳನ್ನಲ್ಲ.
"ಅಂದಿನ ಉದ್ಯೋಗಂ ಪುರುಷ ಲಕ್ಷಣಂ ಇಂದು
ನಿರುದ್ಯೋಗಂ ಶಿಕ್ಷತ ಲಕ್ಷಣಂ ಆಗುವತ್ತ ಸಾಗುತ್ತಿದೆ".

ಪಿತ್ರಾರ್ಜಿತ ಆಸ್ತಿ ಮಾರುವುದು ಪರಂಪರಾನುಗತ ಅಪರಾಧವೆಂಬತೆ ಭಾವಿಸುವ ಕಾಲವೊಂದಿತ್ತು. ಇಂದು ಅಷ್ಟೊಂದು ಆಸ್ತಿ ಇದ್ದು ಕಷ್ಟವೇಕೆ ಪಡುವುದು. ಮಾರಿ ಆರಾಮಾಗಿ ಇರೋಣ ಎನ್ನುವದು ಬಹುಸಂಖ್ಯಾತ ಯುವಕರ ಮನೋಧರ್ಮ. ಮುಂದಿನ ಪೀಳಿಗೆಯ ಬಗ್ಗೆ ಯೋಚಿಸುವುದು ಬೇಡ ಎನ್ನುವವರೇ ಬಹಳ ಜನ. 

                         ಅರಿವೆ ಆಗದ ವಯಸ್ಸಿನಲ್ಲಿ ಅಂದು ಮಾಡಿದ ಮದುವೆಗಳು ಇಂದು ಸುಖ ಸಂಸಾರಗಳಾಗಿ ಮುನ್ನಡೆಯುತ್ತಿವೆ. ಇಂದು ಕಲಿತು, ಅರಿತು, ಮಾತಾಡಿ, ಕೂಡಿ ತಿರುಗಾಡಿ ಒಪ್ಪಿದ ನಂತರ ಮಾಡುವ ಮದುವೆಗಳು ಕೌಟುಂಬಿಕ ನ್ಯಾಯಾಲಯಗಳ ಮೇಜಿನ ಮೇಲಿನ ಫೈಲಿನ ಧೂಳಿನ ಒಳಗೆ ಕಾಗದದ ತುಂಡಿನಲ್ಲಿ ನಡೆಯುತ್ತಿವೆ. ವಿಪರ್ಯಾಸದ ಪರಮಾವಧಿ ದಾಟಿದ ಸಮಯ ಅಲ್ಲವೇ ಇದು.

                  ಪ್ರಶಾಂತ ಸ್ವಭಾವ, ಹೆಚ್ಚಿನ ಸ್ಟೈಲ್ ಮಾಡದವ, ಹೆಚ್ಚಿನ ತಾಂತ್ರಿಕತೆಯ ಸೋಂಕು ತಗುಲಿಸಿಕೊಳ್ಳದವ, ವಿಧ ವಿಧದ ಹವ್ಯಾಸ ಹೊಂದದವ , ಕತೆ ಕಾದಂಬರಿ ಓದುವವ , ಬೈಕ ಇಲ್ಲದವ , ಗರ್ಲ ಫ್ರೆಂಡ್ ಇಲ್ಲದವ ಇಂದು ಅಳಿವಿನಂಚಿನ ಪ್ರಾಣಿ ಎಂಬಂತೆ ಬಿಂಬಿಸಲಾಗುತ್ತಿದೆ. ದುರಾಚಾರಿ, ದುಂದುವೆಚ್ಚಗಾರ, ಕುಡುಕ, ತಿನ್ನುಬಾಕ, ಹಿಂಸಾ ಪ್ರವೃತ್ತಿ ಹೊದಿದವ, ಹೊಸ ಹೊಸ ಗೆಳತಿಯರನ್ನು ಹುಡುಕುವವ, ಪ್ರತಿ ನಟನ ಸ್ಟೈಲ್ ಮಾಡುವವ ಆಧುನಿಕತೆಯ ರಾಜಕುಮಾರನೆಂಬಂತಾಗಿದೆ.
       ಇಂತಹ ಉದಾಹರಣೆಗಳು ಕೆದುಕುತ್ತಾ ಹೊದಂತೆ ಪುಟಿ ಪುಟಿದು ಹೊರ ಹೊಮ್ಮುತ್ತವೆ. ಇಲ್ಲಿ ಯಾವುದು ಸರಿ ಯಾವುದು ತಪ್ಪು ಎನ್ನುವದರ ನಿರ್ಧಾರ ನೈತಿಕತೆಯ ಆಧಾರವಿಲ್ಲದೆ ವೈಯಕ್ತಿಕ ಹಿತದ ಸ್ವೇಚ್ಚಾಚಾರವನ್ನು ಅವಲಂಬಿಸಿರುವುದೆ ಮೂಲ ಕಾರಣ. ಆದರ್ಶಗಳ ಆಯ್ಕೆಯೇ ದಂಧ್ವವಾದರೆ "ಬದುಕಿನಲ್ಲಿ ಸರಳತೆ, ಸಮಗ್ರತೆ ಅಪೇಕ್ಷಣೀಯವಲ್ಲ.
ಇಂತಹ ಬದುಕು ಸಾಮಾಜಿಕವಾಗಿ ಪ್ರೇಕ್ಷಣೀಯವು" ಅಲ್ಲ.
                                 ಇಂತಿ:------
                       *ಮಶ್ಯಾಕ ಎಮ್ ಜಿ*.
                               ಸಾ ॥ ಯಂಭತ್ನಾಳ*
                         ಧನ್ಯವಾದಗಳು

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿವಿಗಳೆಲ್ಲಾ ಕವಿಗಳಾದಾಗ ಭಾಗ ೧

ಕಿವಿಗಳೆಲ್ಲ_ಕವಿಗಳಾದಾಗ_ಭಾಗ ೨

ಕಿಗಳೆಲ್ಲಾ ಕವಿಗಳಾದಾಗ ಭಾಗ ೩